Shrikanth shetty- ಶ್ರೀಕಾಂತ್ ಅಣ್ಣ

ಶಕ್ತಿ ಪರಿಚಯ Shrikanth shetty

ರಾಷ್ಟ್ರೀಯತೆಯ ಪ್ರಬಲ ಸಮರ್ಥಕ.. 

ಇತಿಹಾಸ ಬಗೆದಷ್ಟು , ಕೆದಕಿದಷ್ಟು  ಸತ್ಯತೆ ಮತ್ತು ಸ್ವಾಭಿಮಾನದ ಕಥಾನಕವನ್ನು ತನ್ನ ಒಡಲಲ್ಲಿ ಹುದುಗಿಸಿದೆ..!! ಇದರಲ್ಲಿ ನಾವು ತಿಳಿದ ಸತ್ಯಾಸತ್ಯತೆ ಅದೆಷ್ಟೋ..? ತಿಳಿದ ಸತ್ಯದಲ್ಲಿ ಅದು ಸತ್ಯವೇ ಎಂದು ನಂಬುವಷ್ಟು ಮೂರ್ಖರಾಗಿದ್ದೇವೆ..! ಇಂತಹ ಹಲವಾರು ಇತಿಹಾಸಗಳು, ಭಯಾನಕ ರಕ್ತ ಚರಿತ್ರೆಗಳು ತನ್ನ  ಬೆನ್ನ ಹಿಂದ ನಡೆದಿದ್ದರೂ ಅದರ ಗೊಡವೆಗೆ ಹೋಗದೆ ಸುಮ್ಮನಿದ್ದವರು ನಾವುಗಳೇ.

   ಎಲ್ಲಿ ಯಾರೀರಲಿ, ಯಾರೇ ಕೂಗಾಡಲಿ ವೇದಿಕೆಯ ಕಡೆಗೆ ಸಾಗಿದರೆ ಸಭಾ ಗೃಹದಲ್ಲಿ ಇತಿಹಾಸವು ಕಣ್ಣ ಮುಂದೆಯೇ ನಿಲ್ಲುವುದು.ಪ್ರತೀ ಪ್ರಶ್ನೆಗೆ ತೀಕ್ಷ್ಣ ಉತ್ತರವನ್ನು ನೀಡುತ್ತಾ , ಯುವಕರ ಎದೆಯಲ್ಲಿ ದೇಶ ಭಕ್ತಿಯ ಜೊತೆಗೆ ಧರ್ಮದ ಧರ್ಮ ನಡೆಯನ್ನು ವಿಸ್ತಾರವಾಗಿ ಬಣ್ಣ ಹಚ್ಚುವಂತಹ ವಾಕ್ ಚತುರರಿವರು.

   ಇಲ್ಲಿ ಎಲ್ಲರೂ ಮಾತನಾಡುವವರೆ, ಅದರಲ್ಲಿ ಕೆಲವರು ಸಭೆಯ ಆ ಕ್ಷಣದ ವೈಭವಕ್ಕೆ ಬಣ್ಣ ಹಚ್ಚುವವರು. ಆದರೆ ಶ್ರೀಕಾಂತ್ ಅಣ್ಣ ಮಾತಿನ ಜೊತೆಗೆ ಸಭೆಯ ಆ ಕ್ಷಣದ ಗತ ವೈಭವದ ಜೊತೆಗೆ ಶತಮಾನದ ವೈಭವವನ್ನು ಕಣ್ಣ ಮುಂದೆ ತಂದು, ಅದು ಕೆಲವು ದಿನಗಳವರೆಗೂ ಯುವಕರ ಎದೆಯಲ್ಲಿ ಪಂಜಿನ ಬೆಳಕಿನ ಶಾಖವನ್ನು ತಟ್ಟುವವರು..!!

   ಅರ್ಬಿ ಮನೆ  ಇಂದಿರಾ ಶೆಟ್ಟಿಯವರ ಇಬ್ಬರು ಮಕ್ಕಳಲ್ಲಿ ಮೊದಲನೆಯವರಾಗಿ ಕಾರ್ಕಳ ತಾಲೂಕಿನ ಎಣ್ಣೆಹೊಳೆ( ಎನ್ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಅವರ ಊರು)  ಗ್ರಾಮದಲ್ಲಿ ಜನಿಸಿದರು.ಇವರ ಪ್ರತಿಯೊಂದು ಹೆಜ್ಜೆಯು ಕೆಂಪು ಹಾಸಿನ ದಾರಿಯಾಗಿರಲಿಲ್ಲ. ಬಡತನದ ಬೇಗೆಯಲ್ಲಿಯೇ ಜೀವನ ಕಳೆದವರು. ಪ್ರಾಥಮಿಕ ಶಿಕ್ಷಣವನ್ನು ಎಣ್ಣೆಹೊಳೆ ಶಾಲೆಯಲ್ಲಿ ಪಡೆದು, ಪ್ರೌಢ ಶಿಕ್ಷಣವನ್ನು ಮುಂಬೈಯ ಗೋರೆಗಾಂವ್ ಸರಸ್ವತಿ ನೈಟ್ ಸ್ಕೂಲಿನಲ್ಲಿ ಪಡೆದರು. ಮುಂಬೈ ನಗರಿಯಲ್ಲಿ ಹೋಟೆಲಿನಲ್ಲಿ ಕೆಲಸ ಮಾಡುತ್ತ ವೃತ್ತಿ ಆಧಾರಿತ  ಶಿಕ್ಷಣವನ್ನು  ಅಂಧೇರಿಯಲ್ಲಿ ಪಡೆದರು. ಕಂಪ್ಯೂಟರ್ ಟೆಕ್ನಿಶನ್ ಆಗಲು ಅಗತ್ಯವಾದ  ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್  ತರಬೇತಿಯನ್ನು   ಪಡೆದು ಹೊಸ ಬದುಕಿಗೆ ಮುಂದಡಿ ಇಟ್ಟರು .ಹುಟ್ಟೂರಾದ  ಕಾರ್ಕಳಕ್ಕೆ ಬಂದು ಕಂಪ್ಯೂಟರ್ ಮತ್ತು  ಮೊಬೈಲ್ ಟೆಕ್ನಿಷಿಯನ್ ಆಗಿ 4 ವರುಷ ಸೇವೆ ಸಲ್ಲಿಸಿದರು. ಮೊಬೈಲ್ ಶಾಪಿನಲ್ಲಿ ಬಂದ ಹಣವನ್ನು ಕಾರ್ಕಳದ *ಸಾಹಿತ್ಯ ಭಂಡಾರ* ಪುಸ್ತಕದ ಅಂಗಡಿಗೆ  ಹೋಗಿ ಸುರಿಯುತ್ತಿದ್ದರು. ಇವರು ಇಲ್ಲಿನ ಖಾಯಂ ಗಿರಾಕಿಯಾಗಿದ್ದರು .

ಶಾಲೆಯ ನಾಲ್ಕು ಗೋಡೆಗಳ ಮದ್ಯೆ ಇವರು ಹೆಚ್ಚು ಓದಿರದಿದ್ದರೂ ರಾಷ್ಟ್ರೀಯ ವಿಚಾರದ ಆಸಕ್ತಿ, ಇತಿಹಾಸದ ಸೆಳೆತ ,ದೇಶದ ಭವಿಷ್ಯತ್ತಿನ ಸವಾಲುಗಳ  ಬಗ್ಗೆ  ತೀವ್ರವಾದ ಆಸಕ್ತಿ ಇವರನ್ನು ಹಲವಾರು ಪುಸ್ತಕಗಳನ್ನು ಓದುವಂತೆ ಮಾಡಿತು. ಭಾರತದ ಇತಿಹಾಸದ ಮಗ್ಗಲುಗಳನ್ನು ಎಳೆ ಎಳೆಯಾಗಿ ಓದಿ ವಿಷಯ ಭಂಡಾರವನ್ನು ತನ್ನ ಅರಿವಿನ ಜೊತೆಗೆ ಹೃದಯಕ್ಕೂ ಬಿತ್ತಿದರು.

    2007ರಲ್ಲಿ ಹಿಂದು ಸಂಘಟನೆಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇರಿದ ಇವರು, 2012ರಿಂದ ಸುಮಾರು ಇಲ್ಲಿಯವರೆಗೆ ಸುಧೀರ್ಘ 8 ವರುಷಗಳಲ್ಲಿ ಹಲವಾರು ವೇದಿಕೆಗಳಲ್ಲಿ ಮಾತಿನ ಜೊತೆಗೆ ಸಮಾಜದ ಧ್ವನಿಯಾಗಿ ನಿಂತವರೇ ಶ್ರೀಕಾಂತ್. ಇವರ ಪ್ರತಿಯೊಂದು ಭಾಷಣದಲ್ಲಿ  ಸಮಾಜ ಎದುರಿಸುತ್ತಿರುವ ನೋವಿನ ತುಡಿತವನ್ನು , ಅದನ್ನು ಎದುರಿಸುವ ಬಲವನ್ನು  ಯುವಕರ ಎದೆಯಲ್ಲಿ ಬಿತ್ತುವಂತಹ ಕಲೆ ಗೋಚರಿಸುತ್ತದೆ. ಎಲ್ಲೂ ಧರ್ಮದ ವಿಷಯದಲ್ಲಿ ರಾಜಿ ಆಗದೆ, ಸಂಧಾನಕ್ಕೂ ಸಿದ್ಧವಾಗದೆ ಮಾತಿನ ಚಾಟಿಯಲ್ಲಿ ಇತಿಹಾಸ ವಿವರಿಸುವ ಇವರು , ಇಲ್ಲಿಯವರೆಗೆ ಸುಮಾರು 2000ಕ್ಕಿಂತಲೂ ಮಿಗಿಲಾಗಿ ವೇದಿಕೆಯಲ್ಲಿ ಪ್ರಧಾನ ಭಾಷಣಕಾರರಾಗಿ ನಿಂತಂತಹ ವಾಗ್ಮಿ .ತುಳು ಭಾಷೆಯ, ಕರಾವಳಿ ಸಂಸ್ಕೃತಿಯ ಅಪಾರ ಜ್ಞಾನವನ್ನು ಹೊಂದಿದ ಇವರು, *ಮುಂದಿಲ್ದ ಕೂಟ* , *ತುಳು *ಸಿರಿ ಚಾವಡಿ** ಮುಂತಾದ ಸಂಘಟನಾ ಸಂಘದ ಜೊತೆಗೆ ಹಲವಾರು ವೇದಿಕೆಗಳಲ್ಲಿ ತುಳು ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ತುಳು ಭಾಷೆಯ ವಿಶೇಷತೆಗಳನ್ನು ಕರ್ನಾಟಕದಲ್ಲಿ ಪಸರಿಸಿದ  ಹಲವರಲ್ಲಿ ಇವರು ಒಬ್ಬರು.

   ದತ್ತ ಪೀಠ ಹೋರಾಟದ ವೇದಿಕೆಗಳಲ್ಲಿ   ಕಾಣಿಸಿಕೊಂಡು ,ಆನಂತರ ಗೋಗ್ರಾಮ ರಥ ಯಾತ್ರೆಯ ಮೂಲಕ ಕಾರ್ಕಳದ ಗ್ರಾಮ ಗ್ರಾಮಕ್ಕೂ ಭೇಟಿ ನೀಡಿ ಸಂಘಟನೆಗೆ ದುಡಿದವರು.  ಕಾರ್ಕಳ ತಾಲೂಕಿನಲ್ಲಿ *ಯೂತ್ ಫಾರ್ ನೇಷನ್*  ಎಂಬ ಸಂಘಟನೆಯ ನಾಯಕತ್ವ ವಹಿಸಿ  ಮಾದಕ ವಸ್ತುಗಳ ವಿಷವನ್ನು ವಿಷಯವನ್ನಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವಂತಹ ಕಾರ್ಯವನ್ನು ಕೈಗೊಂಡರು.2014ರಲ್ಲಿ *ನಮೋ ಬ್ರಿಗೇಡ್* ಸಂಘಟನೆಯಲ್ಲಿ ಉಡುಪಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡು ಹಲವಾರು ಚಟುವಟಿಕೆಗಳನ್ನು ಮಾಡಿ ಪ್ರಶಂಸೆಗೆ ಪಾತ್ರರಾದಂತಹ ವ್ಯಕ್ತಿತ್ವ ಇವರದ್ದು.

   ಪ್ರವೃತ್ತಿಯ ಜೊತೆಗೆ ವೃತ್ತಿಯ ಕಡೆಗೆ ಮುಖ ಮಾಡಿದ ಶ್ರೀಕಾಂತ್ ಅಣ್ಣ ಸ್ಪಂದನಾ ಚಾನಲ್ನಲ್ಲಿ ನ್ಯೂಸ್ ಆ್ಯಂಕರ್  ಆಗಿ ಸೇರಿ ತುಳುನಾಡಿನ ದೈವ ದೇವರುಗಳ ಕುರಿತು *ತುಳುನಾಡಿನ ಸತ್ಯೋಲು* ಎಂಬ ಶೀರ್ಷಿಕೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದು, ಇದು ಲಕ್ಷ ಗಟ್ಟಲೆ ವೀಕ್ಷಣೆಯನ್ನು ಪಡೆಯುವತ್ತ ಸಾಗಿತ್ತು.

ನೇಮೋತ್ಸವದ ಸಮಯದಲ್ಲಿ ದೈವಗಳ ಮದಿಪಿಗೆ (ಪಾರಿ) ಸಮಯವನ್ನು ಮೀಸಲು ಇಡುತ್ತಿದ್ದರು. ಪ್ರತಿಷ್ಠಿತ ಜಾಗಗಳಾದ ಕಂಗೊಟ್ಟು ಸ್ಥಾನ,  ಕಲ್ಮಾಡಿ,ಮುಳಿ ಹಿತ್ತಿಲು,ಖಜಾನೆ  ಮುಂತಾದ ಕಡೆ ಪ್ರತೀ ವರ್ಷ ತನ್ನ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ.ಸ್ಪಂದನ ಚಾನಲ್ ನಲ್ಲಿ ನಾಲ್ಕೂವರೆ ವರ್ಷದ ಸೇವೆಯ ನಂತರ ವಿಶ್ವವಾಣಿ ಪತ್ರಿಕೆಯ ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸಿದರು. ಮುಕ್ತ ಚಾನೆಲ್ ನಲ್ಲಿ ನ್ಯೂಸ್ ಎಡಿಟರ್ ಆಗಿ, ಆಡಳಿತ ನಿರ್ದೇಶಕರಾಗಿ ಸೇವೆಯನ್ನು ನೀಡಿದರು. ಇವರ ಹಲವಾರು ವರದಿಗಳು ಫಲಶೃತಿಯನ್ನು  ಕಂಡು ಕುಂದಾಪುರ, ಬ್ರಹ್ಮಾವರ, ಕಡಂದಲೆ, ಕೊಡಂದೂರುಗಳಲ್ಲಿ ದಾನಿಗಳ ಮುಖಾಂತರ ಅಶಕ್ತ ವೃದ್ಧರಿಗೆ ಸೂರನ್ನು ಒದಗಿಸಿಕೊಡುವತ್ತ ತನ್ನ ನಿಸ್ವಾರ್ಥ ಸೇವೆಯನ್ನು ಮಾಡಿದರು. ಪ್ರಸ್ತುತ ಕನ್ನಡದ ದಿಗ್ವಿಜಯ ನ್ಯೂಸ್ ಚಾನಲ್ ನಲ್ಲಿ ಉಡುಪಿ ಜಿಲ್ಲೆಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ...

  ಉಡುಪಿಯ ಜೀವ ನದಿ ಇಂದ್ರಾಣಿ ಕಲುಷಿತಗೊಂಡಾಗ ಅದರ ಉಳಿವಿಗಾಗಿ ಸಮಾನ ಮನಸ್ಕರ ಜೊತೆ ಸೇರಿ  ಹಲವಾರು ಹೋರಾಟಗಳನ್ನು , ಅದರ ರೂಪುರೇಷೆಗಳನ್ನು ಮಾಡಿ *ಇಂದ್ರಾಣಿ ಉಳಿಸಿ* ಎಂಬ ನದಿ ಉಳಿಸುವ ಹೋರಾಟಕ್ಕೆ  ಕಿಡಿಯನ್ನು ಹಚ್ಚಿದರು. ಬಳಿಕ ಅದೊಂದು ಅಭಿಯಾನ ವಾಗಿ ಮುಂದುವರೆಯಿತು. ಉಡುಪಿಯ ಒಳ ಚರಂಡಿ ವ್ಯವಸ್ಥೆಯ ಬದಲಾವಣೆಗೆ 4000 ಕೋಟಿಯ ಬೃಹತ್ ಯೋಜನೆಯೇ ಇಂದು ಸಿದ್ದವಾಗಿದೆ. ಇದರ ಜೊತೆಗೆ ಜನರಲ್ಲಿ ಜಲ ಜಾಗೃತಿಯ ಪರ್ವವು ನದಿಯ ಕುರಿತು ಆರಂಭವಾಯಿತು ಎಂದರೆ ತಪ್ಪಾಗಲಾರದು.

      ಹಲವಾರು ಜನರಿಗೆ ವೈಧ್ಯಕೀಯ ಸಹಾಯದ ಜೊತೆಗೆ ಅಶಕ್ತರಿಗೆ ಹೆಗಲಾಗಿ ನಿಂತು ಕೆಲಸ ಮಾಡಿದ ಅಣ್ಣ, ಎಂದು ತನ್ನ ಕಾರ್ಯವನ್ನು ಎಲ್ಲಿಯು ತಿಳಿಯಪಡಿಸಿಲ್ಲ.

   ನೇರ ಮಾತಿನಿಂದಲೇ, ಸರಿಯಾದ ಉತ್ತರದಿಂದಲೇ ಸಮಾಜದಲ್ಲಿ ನಡೆಯುವ ಕೆಲವು ಸನ್ನಿವೇಶಗಳಿಗೆ ಕ್ಲಪ್ತ  ಸಮಯದಲ್ಲಿ ಉತ್ತರ ಕೊಡುವ ಶ್ರೀಕಾಂತ್ ಅಣ್ಣ, ಕೆಲವೊಮ್ಮೆ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸನ್ನಿವೇಶಗಳು ಕಣ್ಣ ಮುಂದೆಯೇ ಇದೆ. ಅದೆಷ್ಟೋ ವೇದಿಕೆಗಳು, ಅದೆಷ್ಟೋ ಭಾಷಣಗಳು ಹಗಲು ರಾತ್ರಿಯೆನ್ನದೆ ತನ್ನ ಕಾರ್ಯದಲ್ಲಿ ತೊಡಗಿರುವ ಶ್ರೀಕಾಂತ್ ಅಣ್ಣ ಎಂದೂ ತನ್ನ ಕಾರ್ಯದಿಂದ ವಿಮುಖರಾಗಿಲ್ಲ.!

ಹಲವಾರು ವೇದಿಕೆಗಳಲ್ಲಿ ಅನೇಕ ಪ್ರಶಸ್ತಿಗಳನ್ನು ,ಸನ್ಮಾನಗಳನ್ನು  ಮತ್ತು ಸಾವಿರಕ್ಕಿಂತಲೂ ಸ್ಮರಣಿಕೆಗಳನ್ನು ಪಡೆದುಕೊಂಡ ಇವರು ಎಂದೂ ಪ್ರಚಾರದ ಹಿಂದೆ ಹೋದವರಲ್ಲ..!! ಇವರ ಧ್ವನಿಗೆ ಒಂದು ಗೌರವಯುತ ಸ್ಥಾನವಿದೆ. ಅಷ್ಟೇ ಅಲ್ಲ,ಆ ಧ್ವನಿಯಲ್ಲಿ ಇತಿಹಾಸದ ನಾಡಿ ಬಡಿತದ ದಾರಿಯಿದೆ ಎಂದರೂ ತಪ್ಪಾಗಲಾರದು.

 ಕಂಚಿನ ಕಂಠದ ಅಣ್ಣನ ಧ್ವನಿಯಲ್ಲಿಯೇ ಎಲ್ಲವನ್ನು ಆಕರ್ಷಿಸುವ ಶಕ್ತಿ ಇದೆ.ಇತಿಹಾಸ ವಿವರಣೆಯ ನಿಖರತೆ, ಮಾತಿನ ಹಿಡಿತ , ಪ್ರತೀ ವಿಷಯದ ಆಳ ಕೇಳುವವನಿಗೆ ತನ್ನ ಭಾವದ ಲೋಕಕ್ಕೆ,ಸ್ವಾಭಿಮಾನದ ಬಲೆಗೆ ತನ್ನನ್ನು ಒಗ್ಗಿಕೊಳ್ಳುತ್ತಾನೆ. 

   ಶ್ರೀಕಾಂತ್ ಅಣ್ಣ ಅಂದರೆ ತನ್ನ ಮಾತಿನ ಹಿಡಿತದಲ್ಲಿ ಎಲ್ಲವನ್ನು ಗೆಲ್ಲುವ ಚಾಕಚಕ್ಯತೆಯ ಶಕ್ತಿ ಅವರ ಧ್ವನಿಯಲ್ಲಿ ಇದೆ.

  ಅಣ್ಣ ಒಬ್ಬ ಅದ್ಭುತ ಬರಹಗಾರ,ಖಡ್ಗಗಿಂತ ಲೇಖನಿಯೇ ಹರಿತ ಎಂಬ ವಾದದಲ್ಲಿ ಎಷ್ಟು ಸತ್ಯ ಇದೆಯೋ ಅಣ್ಣನ ಬರವಣಿಗೆಯ ಸಾಲಿನಲ್ಲಿ ತೀಕ್ಷ್ಣ ಉತ್ತರವಿರುತ್ತದೆ. ಇವರ  ಬರವಣಿಗೆಯ ಸಾಲಿಗೆ ಮಾರು ಹೋಗದವರೆ ಇಲ್ಲಾ..!!

     ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಅಲೆಯ ಸ್ಪರ್ಶ ನೀಡಿದ *ಸುರಪುರದ ದಂಗೆ* ಯ ಬರಹ ನೈಜತೆಯ ಪ್ರದರ್ಶನದ ಜೊತೆಗೆ , ಸುರಪುರದ ಪ್ರತೀ ಮಣ್ಣಿನ ಕಣದ ಪರಿಚಯವನ್ನು ಓದುಗರಿಗೆ ನೀಡಿದೆ ಎಂದರೆ ತಪ್ಪಾಗಲಾರದು. *ಕನ್ನಡದ ಕಡುಗಲಿಗಳು* ಎಂಬ ಅದ್ಭುತ ಸರಣಿ ಲೇಖನ ಕೂಡ ಆದಷ್ಟು ಬೇಗ *ಅಗ್ರಣಿ* ಎಂಬ ಫೇಸ್ಬುಕ್ ಪೇಜಿನಲ್ಲಿ ಬರಲಿದೆ ಎನ್ನುವುದು ಇನ್ನು ಖುಷಿಯ ವಿಚಾರ .

  ಬಿಡುವಿಲ್ಲದ ಸಮಯದಲ್ಲೂ ,ಯಾವಾಗ ಕರೆ ಮಾಡಿದರೂ ಪ್ರೀತಿಯಿಂದ ಮಾತನಾಡುವ ಗುಣ ಮತ್ತು ಎಲ್ಲರನ್ನೂ ಗೌರವಯುತವಾಗಿ ಕಾಣುವ, ಬೆರೆಯುವ ಈ ವ್ಯಕ್ತಿತ್ವವೇ ಸಾಮಾನ್ಯ ವ್ಯಕ್ತಿಯನ್ನು ಒಂದು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.

   *ಇಸ್ರೇಲ್ ಕಾರ್ಯಾಚರಣೆ* ಎಂಬ ಪುಸ್ತಕ ಆದಷ್ಟು ಬೇಗ ಆ ದೇಶದ ಮಣ್ಣಿನ ಗರ್ವತೆಯನ್ನು ಕನ್ನಡಿಗರಿಗೆ ಅರ್ಪಿಸುವ ಕಾಲ ಸನ್ನಿಹಿತವಾಗಿದೆ.ಅದರ ಜೊತೆಗೆ *ಮೃತ್ಯುಂಜಯ* ಎಂಬ ಹೊತ್ತಗೆಯು ಸಾರ್ವರ್ಕರರ ಜೀವನದ ಪರಿಚಯದ ಜೊತೆ ನಮ್ಮನ್ನು ಸೇರಲು ಕಾತರದಿಂದ ತುದಿಗಾಲಲ್ಲಿ ನಿಂತಿದೆ ಎಂದರೆ ತಪ್ಪಾಗಲಾರದು.

  ಈಗಾಗಲೇ ಇವರು ಬರೆದ  *ಪೇಜಾವರ ಅಜಾರಮರ* ಎಂಬ ಕೃತಿ  ಕಾಂತವರ ಕನ್ನಡ ಪ್ರಕಾಶನದಿಂದ ಹೊರ ಬಂದು ಒಳ್ಳೆಯ ಪ್ರತಿಕ್ರೀಯೆಯನ್ನು ಪಡೆದಿದೆ.

 ಮೇಲೆ ಹೇಳಿದ ಹಾಗೇ ತುಳುನಾಡಿನ  ಆಚಾರ-ವಿಚಾರಗಳು, ದೈವ ದೇವರುಗಳ ಆಚರಣೆಯ ಬಗ್ಗೆ ಇರುವ ಈ ಆಸಕ್ತಿಯೇ ಅಣ್ಣನಲ್ಲಿ ಹೊಸತನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಅನ್ನುವುದು ಅಷ್ಟೇ ಸತ್ಯ.  ಹಿಡಿದ ಕಾರ್ಯವನ್ನು ಮಾಡುವ ತುಡಿತ ಮತ್ತು ಅದರಲ್ಲಿ ಸತ್ಯತೆಯ ಸಮರ್ಪಕ ಜೋಡಣೆ ಇವರ ಬರವಣಿಗೆಯಲ್ಲಿ ಮತ್ತು ಮಾತಿನಲ್ಲಿ ಪ್ರಖರವಾಗಿ ಹೊರ ಹೊಮ್ಮುಲು ಸಾಧ್ಯವಾಯಿತು ಎಂದು ನನ್ನ ನಂಬಿಕೆ..!

  ಕೆಲಸದ ಒತ್ತಡದಲ್ಲೂ ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಒಟ್ಟಿಗೆ ಸಾಗಿಸಲು ಇವರಲ್ಲಿ ಇರುವ ಆ ಧನಾತ್ಮಕ ಚಿಂತನೆಯೇ ಮುಂದೊಂದು ದಿನ ಶ್ರೀಕಾಂತ್ ಅಣ್ಣನನ್ನು ವಿಶಿಷ್ಟರ ಸಾಲಿನಲ್ಲಿ ನಿಲ್ಲಿಸಲಿದೆ.  ಅದನ್ನು  ಕಾಣುವ ದಿನ ದೂರವಿಲ್ಲ..!!

    ಇದು ಶ್ರೀಕಾಂತ್ ಅಣ್ಣನ ಬದುಕಿನ ಕೆಲವು ಪುಟಗಳಷ್ಟೇ, ಇನ್ನುಳಿದವು.. ಅವರೊಳಗೆ ಬಚ್ಚಿಟ್ಟುಕೊಂಡಿವೆ..

*ಬರಹ* *: ವಿಜೇತ್ ಪೂಜಾರಿ ಶಿಬಾಜೆ*


Comments

Popular posts from this blog

ಸೌರಜ್ ಮಂಗಳೂರು

ಶ್ರೀ ಕೆ. ಚಿತ್ತರಂಜನ್ ಕಂಕನಾಡಿ