ಶ್ರೀ ಕೆ. ಚಿತ್ತರಂಜನ್ ಕಂಕನಾಡಿ

ಶಕ್ತಿ ಪರಿಚಯ - ಶ್ರೀ ಕೆ. ಚಿತ್ತರಂಜನ್ ಕಂಕನಾಡಿ

ಗರೋಡಿಗಳ ಪುನರುಜ್ಜೀವನದ ಪಿತಾಮಹ

ಬರಹ : ವಿಜೇತ್ ಪೂಜಾರಿ ಶಿಬಾಜೆ 

ತುಳುನಾಡಿನ ಪ್ರತಿಯೊಂದು ಮನೆತನ ಒಂದು ವಿಶಿಷ್ಟ ಆಚರಣೆಯ ತತ್ವದೊಂದಿಗೆ ನಂಬಿಕೆಯನ್ನೇ ಮೂಲ ಶಕ್ತಿಯನ್ನಾಗಿ ಅಂಗೈಯಲ್ಲಿ ಹಿಡಿದಿಟ್ಟುಕೊಂಡು ಮುಂದೆ ಸಾಗಿದ ಪೀಳಿಗೆ ನಮ್ಮದು.

   ಬದುಕಿನ ಉದ್ದಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದರೆ ಬದುಕು ಬದುಕಾಗಿ ಉಳಿಯುವುದು. ಆ ಕಾರಣಗಳಿಗೆ ಉತ್ತರವನ್ನು ಕಂಡುಕೊಳ್ಳುವತ್ತಾ ಸಾಗಿದರೆ ಆ ಬದುಕು ಇನ್ನೊಬ್ಬರಿಗೆ ಪ್ರೇರಣೆಯಾಗುವುದು. ಇಂತಹ ಪ್ರೇರಣದಾಯಕ ವ್ಯಕ್ತಿತ್ವದ ರೂಪವೇ ಚಿತ್ತರಂಜನ್ ಕಂಕನಾಡಿ.

   ನಮ್ಮ ಸಂಸ್ಕೃತಿ ಉಳಿದರೆ, ನಾವು ಉಳಿದೆವು.! ಅದರೊಟ್ಟಿಗೆ ನಮ್ಮತನ ಉಳಿಯುವುದು ಎಂಬ ಉಕ್ತಿಯಂತೆ, ಹಲವಾರು ಗರೋಡಿಗಳ ಪುನರುಜ್ಜೀವನಕ್ಕೆ ತನ್ನ ಪೂರ್ಣ ಹಸ್ತದ ಸಹಕಾರವನ್ನು ನೀಡಿದಂತಹ ಮೇರು ವ್ಯಕ್ತಿತ್ವ ಇವರದ್ದು.

  ಕರಾವಳಿ ಭಾಗದಲ್ಲಿ ದೈವಗಳ ಕ್ಷೇತ್ರಗಳಲ್ಲಿ ಚಿತ್ತರಂಜನ್ ಕಂಕನಾಡಿ ಎಂಬ ಹೆಸರಿಗೆ ಒಂದು ಗೌರವದ ತೂಕವಿದೆ. ಆ ತೂಕಕ್ಕೆ ಅಷ್ಟೇ ಮೌಲ್ಯವಿದೆ.!

    ಕರಾವಳಿಯ ಪ್ರತಿಯೊಂದು ದಿನಚರಿ ನಮ್ಮ ಸಂಸ್ಕೃತಿಯ ಬೇರಿನಿಂದ ಬಂದಂತಹ ಆಚರಣೆಗಳಾಗಿವೆ. ಅಂತಹ ಆಚರಣೆಗಳ ಒಂದು ಬಲವಾದ ಮೂಲವೇ ಗರೋಡಿಗಳು ಎಂದರೆ ತಪ್ಪಾಗಲಾರದು. ಇದು ತುಳುವ ಮಣ್ಣಿನ ಘಮವನ್ನು ಅನಾದಿ ಕಾಲದಿಂದಲೂ ಪಸರಿಸುತ್ತಲೇ ಬಂದಿರುವ ದಿವ್ಯ ಕೇಂದ್ರಗಳಾಗಿವೆ. ಇಂತಹ ಹಲವಾರು ಗರೋಡಿಗಳ ಏಳಿಗೆಗಾಗಿ ಹಗಲಿರುಳು ಎನ್ನದೆ ದುಡಿದ ಜೀವವೆಂದರೆ ಶ್ರೀ ಕೆ. ಚಿತ್ತರಂಜನ್ ಕಂಕನಾಡಿ.

   ದಿವಂಗತ ತಿಮ್ಮಪ್ಪ ಪೂಜಾರಿ ಮತ್ತು ಜಾನಮ್ಮ ದಂಪತಿಗಳ ಮಗನಾಗಿ 8-3-1943ರಂದು ಜನಿಸಿದ ಇವರು, ತಂದೆ ಪೊಲೀಸ್ ಕೆಲಸದಲ್ಲಿ ಇದ್ದುದರಿಂದ ಚಿಕ್ಕಂದಿನಿಂದಲೇ ಶಿಸ್ತಿನಿಂದ ಬೆಳೆದ ಇವರು ಪ್ರಾಥಮಿಕ ಶಿಕ್ಷಣವನ್ನು ಕಾಸರಗೋಡುವಿನಲ್ಲಿ ಪಡೆದರು.

   ಕರಾವಳಿಯಲ್ಲಿ ಚಿರಪರಿಚಿತ ಮುಖಚರ್ಯೆ ಇವರದ್ದು. ತಮ್ಮ ಹದಿನೆಂಟನೇ ವಯಸ್ಸಿನಲ್ಲೇ ಕಟ್ಟಡ ನಿರ್ಮಾಣದ ಜವಾಬ್ದಾರಿಯ ವೃತ್ತಿಯನ್ನು ತನ್ನ  ಹೆಗಲಿಗೆ ಹಾಕಿಕೊಂಡ ಇವರು, ಗರೋಡಿಗಳ ಆಚಾರ-ವಿಚಾರಗಳಲ್ಲಿ ಆಸಕ್ತಿಗಳನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡ ಇವರು 12ನೇ ವಯಸ್ಸಿನಲ್ಲಿಯೇ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಸೇವಾ ಕಾರ್ಯಕರ್ತರಾಗಿ ತನ್ನ ಜೀವನದಲ್ಲಿ ಗರೋಡಿಗಳ ಪುನರುಜ್ಜೀವನಕ್ಕೆ ಟೊಂಕ ಕಟ್ಟಿ ನಿಂತಂತಹ ಮೇರು ವ್ಯಕ್ತಿತ್ವದ ಕ್ರೀಯಾಶೀಲ ಜೀವ ಇವರದು.

    ತುಳುನಾಡಿನ ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯರ ಅಗಾಧ ಭಕ್ತರಾದ ಇವರು, ಅವರ ಆರಾಧನೆಯ ಪ್ರತಿಯೊಂದು ಮಜಲನ್ನು ತಾತ್ವಿಕವಾಗಿ ಅನುಸರಿಸಿ ಅಳವಡಿಸಿಕೊಂಡು ಜೀವನದಲ್ಲಿ ಹೆಜ್ಜೆ ಇಟ್ಟವರು.

    ತುಳುನಾಡಿನ ಐತಿಹ್ಯದ ಜೊತೆಗೆ ಅದರ ಅರಿವಿನ ಆಳವನ್ನು ಬಲ್ಲಂತಹ ಇವರಿಗೆ ಅದೇ  ಪ್ರೇರಣಾದಾಯಕ ಶಕ್ತಿಯನ್ನು ನೀಡಿತ್ತು. ಮಂಗಳೂರಿನ ಇತಿಹಾಸ ಪ್ರಸಿದ್ಧ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾಗಿ 2004ರಿಂದ ಪೂರ್ಣ ಜವಾಬ್ದಾರಿಯನ್ನು ಹೊತ್ತಂತಹ ಇವರು, ಗರೋಡಿಯ ನವೀಕರಣಕ್ಕೆ ಬೇಕಾದ ಎಲ್ಲಾ ಪ್ರಯತ್ನವನ್ನು ಮಾಡಿ ಗರೋಡಿಗಳಲ್ಲಿ ಕಂಕನಾಡಿ ಗರೋಡಿಯನ್ನು ಒಂದು ವಿಶೇಷ ಸ್ಥಾನದಲ್ಲಿ ತಂದು ನಿಲ್ಲಿಸಿದ ಕೀರ್ತಿ ಶ್ರೀ ಕೆ. ಚಿತ್ತರಂಜನ್ ರವರಿಗೆ ಸಲ್ಲುತ್ತದೆ. ಕ್ಷೇತ್ರದ ಮೂರು ಹಂತದ ಜೀರ್ಣೋದ್ಧಾರದ ಕಾರ್ಯವನ್ನು ಕೋಟಿಗೂ ಮಿಕ್ಕಿ ಅನುದಾನದಿಂದ ಎಲ್ಲಿಯೂ ಆಚರಣೆಗೆ ಧಕ್ಕೆ ಆಗದಂತೆ ಪುನರುಜ್ಜೀವನಗೊಳಿಸಿದ ಇವರ ಅಧ್ಯಕ್ಷತೆ ಒಂದು ವಿಶೇಷ ಇತಿಹಾಸವನ್ನು ಸೃಷ್ಟಿ ಮಾಡಿತ್ತು. ಅವಧಿಗಿಂತ ಮುಂಚಿತವಾಗಿ ಕಾರ್ಯ ಯೋಜನೆಗಳು ಸಾಕಾರಗೊಂಡಿದ್ದವು. ಇದು ಕೂಡ ಕರಾವಳಿಯಲ್ಲಿ ಗರೋಡಿಗಳ ವಿಚಾರದಲ್ಲಿ ಹೊಸ ಭಾಷ್ಯವನ್ನೇ ಬರೆಯಿತು.!!

   ಕರಾವಳಿಯಲ್ಲಿ ದೈವ ದೇವರುಗಳ, ಗರೋಡಿಗಳ ಮತ್ತು ದೇವಸ್ಥಾನಗಳ ಅಭಿವೃದ್ಧಿಯ ವಿಷಯದಲ್ಲಿ ಬಹು ಬೇಗನೆ ಸ್ಪಂದಿಸುವ ಇವರ ವ್ಯಕ್ತಿತ್ವವೇ ಇಂದು ಇವರನ್ನು ಮೇಲಿನ ಪಂಕ್ತಿಯಲ್ಲಿ ಮೊದಲಿಗನಾಗಿ ನಿಲ್ಲಿಸಿದೆ.

       ಪುತ್ತೂರು ತಾಲೂಕಿನ ಪ್ರಸಿದ್ಧ ಗರೋಡಿ ಕ್ಷೇತ್ರಗಳಲ್ಲಿ ಒಂದಾದ, ತನ್ನ ಆಚರಣೆಯ ಜೊತೆಗೆ ಇತಿಹಾಸದ ಭಾವನಾತ್ಮಕ ಸಂಬಂಧವನ್ನು ಹೊಂದಿದ ಗರೋಡಿಗಳಲ್ಲಿ ಅಗತ್ತಾಡಿ ದೋಲ ಬಾರಿಕೆ ಗರೋಡಿಯು ಪ್ರಮುಖವಾದುದು.ಇಲ್ಲಿ ಕೋಟಿ ಚೆನ್ನಯರು ಬಂದು ಹೋದ ಸುರಿಯ ಮತ್ತು ಗಿಂಡೆ ಇದೆ.2008ರಲ್ಲಿ ಈ ಗರೋಡಿಯ ನವೀಕರಣದ ಗೌರವಾಧ್ಯಕ್ಷರಾದ ಇವರ ಪೂರ್ಣ ಸಹಕಾರದಿಂದ ಜೀರ್ಣೋದ್ಧಾರಕ್ಕೆ ಹೆಗಲು ಕೊಟ್ಟಂತಹ ಚಿತ್ತರಂಜನ್ ರವರು ಕ್ಷೇತ್ರದ ಟ್ರಸ್ಟಿನ ಗೌರವಾಧ್ಯಕ್ಷರಾಗಿಯೂ ಕೂಡ ಸೇವೆ ಸಲ್ಲಿಸಿ ಜವಾಬ್ದಾರಿಯನ್ನು ಜವಾಬ್ದಾರಿಯುತವಾಗಿ ತೆರೆ ಮೇಲೆ ತಂದವರು ಇವರು.

   ಚಿತ್ತರಂಜನ್ ಅವರಿಗೆ ಪ್ರತಿಯೊಂದು ವಿಚಾರಕ್ಕೆ ಮುಕ್ತ ಮನಸ್ಸಿನಿಂದ ಬೆಂಬಲವನ್ನು ಕೊಟ್ಟಂತಹ ಧರ್ಮ ಪತ್ನಿ ಸುಲೋಚನರವರ, ತುಳುನಾಡಿನ ಸಂಸ್ಕೃತಿಯ ಜ್ಞಾನ ಚಿತ್ತರಂಜನ್ ಅವರಿಗೆ ಜೊತೆಯಾಯಿತು.

  ಬೆಳ್ತಂಗಡಿ ತಾಲೂಕಿನಲ್ಲಿ ಶಿಶಿಲ  ಒಟ್ಲ ಗರೋಡಿಗೆ ಒಂದು ವಿಶಿಷ್ಟವಾದ ಸ್ಥಾನಮಾನವೇ ಇದೆ. ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರಿಗೆ ಪ್ರಾಥಮಿಕ ಶಿಕ್ಷಣದ ಜ್ಞಾನವನ್ನು ನೀಡಿದ ಗರೋಡಿ ಶ್ರೀ ಕ್ಷೇತ್ರ ಒಟ್ಲ ಗರೋಡಿ, ಇದರ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾಗಿ ನಿಯೋಜನೆಗೊಂಡಿದ್ದರು. ವಿಶಿಷ್ಟ ಕಾರ್ಯದಿಂದ ಮತ್ತು ತನ್ಮಯತೆಯಿಂದ ಹೊತ್ತ ಜವಾಬ್ದಾರಿಯನ್ನು ಪೂರ್ಣವಾಗಿ ಮಾಡಿ, ಒಟ್ಲ ಗರೋಡಿಯ ಅಭಿವೃದ್ಧಿಯಲ್ಲಿ ಇವರ ದೊಡ್ಡ ಕಾಣಿಕೆಯೇ ಇದೆ. ಪ್ರತೀ ವರ್ಷ ವಾರ್ಷಿಕ ನೇಮೋತ್ಸವಕ್ಕೇ ಅಥವಾ ಇನ್ಯಾವುದೇ ಪೂಜಾ ವಿಧಿ ವಿಧಾನಗಳಿಗೆ  ಇವರ ಸಹಕಾರ ಇದ್ದೇ ಇರುತ್ತೆ. ಇವರು ಈಗ ಆಡಳಿತ ಸಮಿತಿಯ ಗೌರವಾಧ್ಯಕ್ಷರಾಗಿ ತನ್ನ ಸೇವೆಯನ್ನು ನೀಡುತ್ತಾ ಬರುತ್ತಿದ್ದಾರೆ.

   ತನ್ನ ಇಳಿ ವಯಸ್ಸಿನಲ್ಲಿ ಎಲ್ಲೂ ಕುಂದದೇ ಪ್ರತಿಯೊಂದು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಇವರ ಚಿಂತನಾಶೀಲ ನಡತೆ ಎಲ್ಲರನ್ನೂ ಮಂತ್ರ ಮುಗ್ಧಗೊಳಿಸುತ್ತದೆ ಎಂದರೆ ತಪ್ಪಾಗಲಾರದು. ಎಲ್ಲರ ಜೊತೆ ಪ್ರೀತಿ ಪೂರ್ವಕವಾಗಿ ಮಾತನಾಡುವ ಇವರಲ್ಲಿ ಜ್ಞಾನದ ಭಂಡಾರವೇ ತುಂಬಿದೆ.

  ತುಳುನಾಡಿನ ಹಿರಿಮೆ ಗೆಜ್ಜೆಗಿರಿ ನಂದನ ಬಿತ್ತಿಲಿನ ನವೀಕರಣದ ಸ್ಥಾಪಕಾಧ್ಯಕ್ಷರಾಗಿ ಅಲ್ಲಿಂದ ಇಲ್ಲಿಯವರೆಗೆ ಪ್ರತೀ ಕಾರ್ಯದಲ್ಲೂ ನಿಂತಂತಹ ಚಿತ್ತರಂಜನ್ ಅವರ ನಿಸ್ವಾರ್ಥ ಸೇವೆ ನಮ್ಮ ಕಣ್ಣ ಮುಂದೆಯೇ ಇದೆ. ಬಿಲ್ಲವ ಸೇವಾ ಸಮಾಜದ ಸ್ಥಾಪನೆಗೆ ಕಾರಣಕರ್ತರಾಗಿ ಸಂಸ್ಥೆಯ ಅಧ್ಯಕ್ಷರಾಗಿ ಮತ್ತು ವಿದ್ಯಾನಿಧಿಯೆಂಬ ಸಾಮಾಜಿಕ ಕಾರ್ಯದ ಜವಾಬ್ದಾರಿಯನ್ನು ವಹಿಸಿಕೊಂಡ ಇವರು ಹಲವಾರು ವಿಧ್ಯಾರ್ಥಿಗಳ ಬದುಕಿಗೆ ದಾರಿಯ ಬೆಳಕನ್ನು ತೋರಿಸಿದ ನಿಸ್ವಾರ್ಥ ಹೃದಯದವರು. ಪ್ರತೀ ವರ್ಷ ಹಲವಾರು ಬಡ ವಿದ್ಯಾರ್ಥಿಗಳನ್ನು ಶಿಕ್ಷಣಕ್ಕೆ ದತ್ತು ತೆಗೆದುಕೊಂಡು ಅವರಿಗೆ ಉದ್ಯೋಗವನ್ನು ಕೊಡುವ ತನಕ ತನ್ನ ಸೇವೆಯನ್ನು ಮುಕ್ತ ಮನಸ್ಸಿನಿಂದ ಎಲ್ಲಿಯೂ ಪ್ರಚಾರ ಮಾಡದ ದಾನಿ ಇವರು..!!

  ಸಾವಿರದ ಇನ್ನೂರು ವರುಷಗಳ ಇತಿಹಾಸವಿರುವ ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಮೊದಲನೇ ಮತ್ತು ಎರಡನೇ ಹಂತದಲ್ಲೂ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರಂತರ ಸೇವೆಯನ್ನು ನೀಡುತ್ತಾ ತನ್ಮಯತೆಯಿಂದ ಕಾರ್ಯವನ್ನು ಮಾಡಿದಂತಹ ಶುದ್ಧ ಹಸ್ತದ ವ್ಯಕ್ತಿ ಇವರು. ಹಾಗೆಯೇ ದಕ್ಷಿಣ ಅಯೋಧ್ಯೆಯೆಂದೇ ಪ್ರಖ್ಯಾತವಾಗಿರುವ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಜೀರ್ಣೋದ್ದಾರ  ಸಮಿತಿಯಲ್ಲಿ  ಮತ್ತು ಟ್ರಸ್ಟಿನ ಮುಖ್ಯಸ್ಥರಾಗಿ ಸುದೀರ್ಘ ಕಾಲ ಕ್ಷೇತ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡವರು.  ಕ್ಷೇತ್ರದ ಮೊದಲ ಯತಿವರ್ಯ ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಆಪ್ತ ಶಿಷ್ಯರಾಗಿ, ಭಕ್ತರಾಗಿ ಕ್ಷೇತ್ರದ ಇತಿಹಾಸದಲ್ಲಿ ಒಂದು ಅಚ್ಚಳಿಯದ ಸೇವೆಯನ್ನು ಮಾಡಿದ ವ್ಯಕ್ತಿತ್ವ ಇವರದ್ದು.

   ಬಿಲ್ಲವರ ಮೂಲ ಪುರುಷರೆಂದು ಕರೆಯಲ್ಪಡುವ ಹೆಸರಾಂತ ಮಾಂತ್ರಿಕ ವೈದ್ಯ ಶ್ರೀ ಸಿದ್ದಮರ್ಮ ಬೈದ್ಯರ ಐನೂರು ವರುಷಗಳ ಹಿಂದೆ ಸ್ಥಾಪಿಸಿದ ಉಳ್ಳಾಲಬೈಲು ಶ್ರೀ ಮಹಾಗಣಪತಿ ವೈದ್ಯನಾಥ ದೇವಸ್ಥಾನದ ನವೀಕರಣ ಜವಾಬ್ದಾರಿಯನ್ನು ಕೂಡ ಹೊತ್ತು ಯಶಸ್ವಿಯಾಗಿ ಕ್ಷೇತ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

  ವಿಶ್ವ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಅಭಿವೃದ್ಧಿ ಸಮಿತಿಯ ಸದಸ್ಯರಾಗಿ ಕ್ಷೇತ್ರದ ಎಲ್ಲಾ ಕಾರ್ಯಗಳಲ್ಲಿ ಜೊತೆಗಿರುವ ಚಿತ್ತರಂಜನ್ ಅವರು ಸಾಮಾಜಿಕ ಕಾರ್ಯಗಳಲ್ಲಿ ಒಂದು ಹೆಜ್ಜೆ ಮುಂದೆಯೇ. ಕಳೆದ 25 ವರುಷದಿಂದ ಶೈಕ್ಷಣಿಕ ಕ್ಷೇತ್ರದ ವಿದ್ಯಾರ್ಥಿಗಳಿಗೆ ಧನ ಸಹಾಯ, ಉದ್ಯೋಗವನ್ನು ಕೊಟ್ಟು ಅವರ ಬಾಳಿಗೆ ಬೆಳಕಾದಂತಹ ನಿಷ್ಕಲ್ಮಶ ಮನಸಿನ ವ್ಯಕ್ತಿ ಇವರು.

  ತುಳುನಾಡಿನ ಅವಳಿ ಶಕ್ತಿಗಳಾದ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ಜೀವನದ ಪ್ರತಿಯೊಂದು ಮಜಲಿನ, ಪ್ರತೀ ನಡೆಯನ್ನು ಆಳವಾಗಿ ಅಧ್ಯಯನ ಮಾಡಿ, ವಿಚಾರಶೀಲ ಮತ್ತು ತಾತ್ವಿಕ ಅಂಶಗಳನ್ನು ಯುವ ಪೀಳಿಗೆಗೆ ತಿಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

  ನಿಷ್ಠೆ, ಪ್ರಾಮಾಣಿಕ ವ್ಯಕ್ತಿತ್ವ ಇವರನ್ನು ಇಂದು ವಿಶಿಷ್ಟರ ಸಾಲಿನಲ್ಲಿ ಮೊದಲಿಗನಾಗಿ ನಿಲ್ಲಿಸಿದೆ. ಮತ್ತೊಂದು ಇವರ ಕಾರ್ಯವನ್ನು ಇಲ್ಲಿ ನೆನಪಿಸಲೇ ಬೇಕು.ಅನೇಕ ಬಡ ಕುಟುಂಬಗಳ ಹಲವಾರು ಮದುವೆ ಕಾರ್ಯಗಳನ್ನು ಸ್ವತಃ ತಾವೇ ನಿಂತು ನೆರವೇರಿಸಿದ ಹಲವು ಉದಾಹರಣೆಗಳು ಕಣ್ಣ ಮುಂದೆಯೇ ಇದೆ. ಉಡುಪಿ ತಾಲೂಕಿನ ಬಾರ್ಕೂರಿನ ಸಾಹೇಬ್ರ ಕಟ್ಟೆ ಎಂಬಲ್ಲಿ ಐ.ಟಿ.ಐ ತಾಂತ್ರಿಕ ಸಂಸ್ಥೆಯ ಟ್ರಸ್ಟಿನ ಪ್ರಧಾನ ವ್ಯಕ್ತಿಯಾಗಿ ಇದ್ದು, ಹಲವಾರು ತಾಂತ್ರಿಕ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ  ವಸತಿ ನಿಲಯವನ್ನು ನೀಡಿ ಹಲವಾರು ಬಡ ವಿದ್ಯಾರ್ಥಿಗಳನ್ನು ಕೈ ಹಿಡಿದು ದಡ ಸೇರಿಸಿದ ವ್ಯಕ್ತಿ ಇವರು.!!

  ಬಾಕಿಲ ಗುತ್ತು ಮಾಣಿ ಗರೋಡಿಯ ನವೀಕರಣದ ಗೌರವಾಧ್ಯಕ್ಷರಾಗಿಯೂ ತನ್ನ ಕಾರ್ಯವನ್ನು ಮಾಡಿರುತ್ತಾರೆ. ಹಾಗೆಯೇ ಮಂಗಳೂರಿನ ಚಿಪ್ಪಾರ್ ಗರೋಡಿಯ ಅಭಿವೃದ್ಧಿಯ ಸಲಹೆಗಾರರಾಗಿ ಆಯ್ಕೆಗೊಂಡು ಗರೋಡಿಯ ನವೀಕರಣದ  ಜವಾಬ್ದಾರಿಯನ್ನು ತನ್ನ ಹೆಗಲಿಗೆ   ಹಾಕಿಕೊಂಡಂತಹ ಇವರು ಪ್ರತೀ ಜನರ ಎದೆಯಲ್ಲಿ ನಂಬಿಕೆಯ ಧೈರ್ಯವನ್ನು ತುಂಬಿ ಗರೋಡಿಗಳ ಪುನರುಜ್ಜೀವನಕ್ಕೆ ಹೊಸ ಭಾಷ್ಯವನ್ನು ಬರೆದವರು.

    ಹಾಗೆಯೇ ಕೆಮ್ಮಲೆದ ಬ್ರಹ್ಮ ಎಣ್ಮೂರು ಮೂಲ ಸ್ಥಾನದ ಜೀರ್ಣೋದ್ಧಾರದ ಗೌರವಾಧ್ಯಕ್ಷರಾಗಿ ಆಯ್ಕೆಗೊಂಡು ಎಲ್ಲಾ ನವೀಕರಣ ಕಾರ್ಯಗಳು ಪೂರ್ಣವಾಗಿ  ಬ್ರಹ್ಮಕಲಶೋತ್ಸವಕ್ಕೇ ಸಿದ್ಧವಾಗಿ ನಿಂತಿದೆ.

  ತನ್ನ ವಿಚಾರಶೀಲ ಸಿದ್ಧಾಂತ ಇತಿಹಾಸದ ಬಗೆಗಿನ ತಿಳುವಳಿಕೆ, ಅದರ ಆಳದ ಮಹತ್ವ ಮತ್ತು ತುಳುನಾಡಿನ ಆಚಾರ-ವಿಚಾರಗಳ ವಿಮರ್ಶೆಯ ಜ್ಞಾನ ಮತ್ತು ಕೋಟಿ-ಚೆನ್ನಯರ ಬಗೆಗಿನ ವಿಶೇಷ ಆಸಕ್ತಿಯಿಂದ ಇಂದು ಚಿತ್ತರಂಜನ್ ಅವರನ್ನು ತುಳುನಾಡಿನಲ್ಲಿ ವಿಶೇಷವಾಗಿ ಕಾಣುತ್ತಾರೆ.

    ಇದು ಚಿತ್ತರಂಜನ್ ಅವರ ಬದುಕಿನ ಪುಸ್ತಕದ ಕೆಲವು ಪುಟಗಳಷ್ಟೇ, ಇನ್ನುಳಿದವು ಇತಿಹಾಸ.

Comments

Popular posts from this blog

ಸೌರಜ್ ಮಂಗಳೂರು

Shrikanth shetty- ಶ್ರೀಕಾಂತ್ ಅಣ್ಣ